Friday, August 28, 2009

ಬದಲಾದ ಕಾಲದೊಳು ಬಾಲ್ಯದ ನೆನಪು.

ಹಳ್ಳಿಯಲ್ಲಿ:
ಕಾಲಕ್ಕೆ ತಕ್ಕ ವೇಷ, ಭೂಷಣ, ಸಂಸ್ಕೃತಿ. ಹಿಂದೆ ಮಳೆಗಾಲದ ಕೆಲವು ತುಣುಕುಗಳನ್ನು ಹೇಳುತ್ತಾ, ಮಳೆಗಾದ ತಿಂಡಿಗಳ ಬಗ್ಗೆ ಮುಂದೆ ಬರೆಯುವೆ ಅಂದಿದ್ದೆ. ನಾಲ್ಕಾರು ದಿನಗಳ ಹಿಂದೆ ಆಷಾಡ ಮಾಸದ ದುರ್ಗಾ ನಮಸ್ಕಾರ ಪೂಜೆಗಾಗಿ ಊರಿಗೆ ಹೋಗಿದ್ದಾಗ ಅವುಗಳನ್ನು ಸವಿಯುವಂತಾಗಿತ್ತು. ನಾಲ್ಕು ದಿನ ಸಪ್ಪಗಾಗಿದ್ದ ಮಳೆ ಮತ್ತೆ ಭೋರ್ಗರೆಯಲು ಸುರುವಿಟ್ಟಿತ್ತು. ಅದೂ ಮನೆಯಿಂದ ಹೊರ ಹೊರಡಲಾಗದಂತ ಪರಿಸ್ಥಿತಿ. ಏನು ಮಾಡುವುದು, ಒಂದೇ ಕೆಲಸ ಅಮ್ಮ ಮಹಾನಗರಿಯಲ್ಲಿ ಸಿಗದ ತಿಂಡಿಗಳು ನನಗೀಗ ಬೇಕು.
ಸರಿ ಸುರುವಾಯಿತು, ಬೆಳಗ್ಗೆ ತಿಂಡಿಗೆ ಹಲಸಿನ ಕಾಯಿ ದೋಸೆ, ಹಲಸಿನ ಹಣ್ಣಿನ ಗೆಣಸಲೆ, ಕಡುಬು, ಕೆಸುವಿನ ಪತ್ರೊಡೆ ಇತ್ಯಾದಿ. ಮದ್ಯಾಹ್ನಕ್ಕೆ ಹಲಸಿನಕಾಯಿ ಪಲ್ಯ, ಸಾಂಬಾರು, ಹಪ್ಪಳ, ಕಾಡು ಮಾನ ಹಣ್ಣಿನ ಸಾಸಿವೆ, ಹಲಸಿನ ಹಣ್ಣಿನ ಪಾಯಸ. ಸಾಯಂಕಾಲದ ಲಘು ತಿಂಡಿಗೆ ಹಲಸಿನ ಹಪ್ಪಳ, ಚಿಪ್ಸ್[ಸೋಂಟೆ], ಉಂಡಳಕಾಳು, ಹಲಸಿನ ಬೀಜ, ಗೋಡಂಬಿ, ದೀವಿಗೆ ಹಲಸಿನ ಚಿಪ್ಸ್, ಬಜ್ಜಿ, ರಾತ್ರಿ
ಹಲಸಿನ ಕಾಯಿ/ಹಣ್ಣಿನ ದೋಸೆ, ಸೌತೆಕಾಯಿ[ಚಕ್ರಪ್ಪೆ] ದೋಸೆ. ಅಂತೂ ಬಗೆಬಗೆಯ ತಿಂಡಿಗಳು, ನಾಲ್ಕು ದಿನಗಳಲ್ಲಿ ಇಷ್ಟೆಲ್ಲಾ ತಿನ್ನುವುದು ಹೇಗೆ ಅಂತಿರಾ! ತಿನ್ನಲೇಬೇಕು ಇಲ್ಲದಿದ್ರೆ ಮುಂದಿನ ವರ್ಷದವರೆಗೆ ಕಾಬೇಕು.
ಮಹಾನಗರಿಯಲ್ಲಿ:
ಹಳ್ಳಿಗೆ ಹೋಗಿದ್ದು ನಿಜವಾದರೂ ಮಹಾನಗರಿಯಲ್ಲಿ ಏನಾಗುತ್ತಿದೆ ಎಂಬ ಯೋಚನೆ. ಕಾರಣ ಹಿಂದುರಿಗಿ ಬರಲೋಚಿಸಿದ ದಿನ ಬಂದ್ ಮಾಡುತ್ತೇವೆಂದು ಕೆಲವು ಸಂಘಟನೆಗಳು ಹೇಳಿದ್ದವು. ಅಗತ್ಯ ಹೋಗಲೇ ಬೇಕಿದ್ದರಿಂದ ಹೊರಟಿದ್ದೆ. ಮಹಾನಗರದ ಸುದ್ದಿ ತಿಳಿಯಲು ಇದ್ದ ಮಾರ್ಗ ದೂರದರ್ಶನ. ವಿದ್ಯುತ್ ಇದ್ದಾಗ ವಾರ್ತೆ ನೋಡಿ ಪರಿಸ್ಥಿತಿಯ ಅವಲೋಕನ. ಎರಡನೆ ದಿನದ ವಾರ್ತೆಯಲ್ಲಿ ನಾನು ಅಂದುಕೊಂಡಿದ್ದಂತೆ ಸಂಘಟನೆಯ ಪ್ರಮುಖರ ಬಂಧನ ಸುದ್ದಿ ಕೇಳಿ ಸ್ವಲ್ಪ ನಿರಾಳತೆ. ಪರಿಸ್ಥಿತಿ ಹತೋಟಿಯಲ್ಲಿರುವ ಆಶಯ. ಅದರ ಜೊತೆಗೆ ಹಂದಿಜ್ವರದ ಭಯ.
ಹಳ್ಳಿಯಲ್ಲಿ:
ಭೋರ್ಗರೆಯುವ ಮಳೆ. ಹಿಂದೆ ಹೇಳಿದಂತೆ ಕಾನನದೊಳಗೆ ಮರ ಧರೆಗುರುಳಿ ವಿದ್ಯುತ್ ಕಡಿತ. ಮಳೆ ಮೋಡದಿಂದಾಗಿ ಮಟ ಮದ್ಯಾಹ್ನದಲ್ಲೂ ಕತ್ತಾವರಿಸಿತ್ತು. ಬೆಳಕಿಗಾಗಿ ಎಲ್ಲೆಲ್ಲೂ ಒಂದೇ ಲಾಟೀನು. ಸಮಯ ಕಳೆಯಲು ತಿಂಡಿಗಳು, ಜೊತೆಗೆ ಒಂದಷ್ಟು ಪುಸ್ತಕಗಳು. ಮತ್ತೆ ಬಾಲ್ಯದ ನೆನಪುಗಳು. ವಿದ್ಯುತ್ತೇ ಇಲ್ಲದ ದಿನಗಳ ಹಿಂಬೇಟೆ. ನಾಲ್ಕು ದಿನಗಳಲ್ಲಿ ಪಟ್ಟಣದ ಆಧುನಿಕತೆಯಿಲ್ಲದೆ ಕಳೆದ ಹಳ್ಳಿ ಬದುಕು ಮನ ತಣಿಸಿತ್ತು. ಈ ಬಾರಿ ಕೆಲವೊಂದು ಆಧುನಿಕ ತಂತ್ರಜ್ಞಾನಗಳು ಹಳ್ಳಿಯತ್ತ ಮುಖ ಮಾಡಿದ್ದರಿಂದ ಒಂದೇ ದಿನದಲ್ಲಿ ವಿದ್ಯುತ್ ಬಂದಿತ್ತು.
ಬಹಳ ದಿನಗಳ ನಂತರ ಊರಿಗೊಂದು ಸುತ್ತು ಹಾಕಲು ಯೋಚಿಸಿ ಮೂರನೇ ದಿನ ಹೊರಟವನಿಗೆ ಮೊದಲು ಸ್ವಾಗತಿಸಿದ್ದು ಆಡುಬಾಷೆಯ ಉಂಬುಳ [ಆಂಗ್ಲಭಾಷಿಕ ಲೀಚ್]. ಅದೇನೂ ಅಂತ ವಿಷಯವಲ್ಲ, ಹಿಂದೆ ಮಳೆಗಾಲದಲ್ಲಿ ಮನೆಯಂಗಳದಲ್ಲೆ ಕಾಣುತ್ತಿತ್ತು. ಮುಂದೆ ಸಾಗಿದರೆ ಕಾಲು ದಾರಿಯ ಎರಡೂ ಬದಿ ಮುಗಿಲೆತ್ತರದ ವೃಕ್ಷಗಳು, ಅವುಗಳ ಮಧ್ಯೆಯಿಂದ ಛತ್ರಿಯ ಮೇಲೆ ಟಿಪ್ ಟಿಪೆಂದು ಬೀಳುವ ಮಳೆಹನಿಗಳು. ರಸ್ತೆ ತಲುಪಿ ನಾಲ್ಕಾರು ಹೆಜ್ಜೆ ನಡೆದರೆ ಊರ ಹೊಳೆ. ಭೋ ಎನ್ನುತ್ತಿದ್ದ ಹೊಳೆ ದಾಟಿ ಮುನ್ನಡೆದರೆ ನನ್ನ ಶಾಲೆ. ಮೊದಲ ಆಧುನಿಕ ಶಿಕ್ಷಣ ಪಡೆದ ಪ್ರಾಥಮಿಕ ಶಾಲೆ ಆಧುನಿಕ ಕೊಠಡಿಗಳು ಸೇರ್ಪಡೆಗೊಂಡಿದ್ದರೂ ಹಳೆಯ ಹೊಳಪನ್ನು ನೆನಪಿಸಿತ್ತಿತ್ತು. ಹಾಗೆಯೆ ಆಟದ ಬಯಲು, ಪರಿಚಯಸ್ಥರ ಮನೆ, ಯುವ ಮಿತ್ರರ ಯುವಕಮಂಡಲಕ್ಕೆಲ್ಲ ಒಂದು ಸುತ್ತು ಹಾಕಿ ಮನೆಗೆ ಹಿಂದುರಿಗಿದರೂ ಮಳೆಯ ಆರ್ಭಟ ಕಡಿಮೆಯಾಗಿರಲಿಲ್ಲ.
ಅಂತೂ ರಜೆಯ ಕೊನೆಯದಿನ ಅಮ್ಮ ಕಟ್ಟಿ ಕೊಟ್ಟ ತಿನಿಸುಗಳ ಜೊತೆಗೆ ಹೊರಟಾಗ ಮಳೆಯ ಸಿಂಚನವಾಗುತ್ತಿತ್ತು. ಕರ್ಣಾಟಕ ಸಾರಿಗೆ ಬಂಡಿಯಲ್ಲಿ ಕುಳಿತು ಹಸಿರಸಿರಿಯ ವೀಕ್ಷಿಸುತ್ತಾ ಮಹಾನಗರಿಯೆಡೆಗೆ ಮುಖಮಾಡಿದಾಗ ಮತ್ತೆ ಬಾಲ್ಯದ ನೆನಪುಗಳು ಕಣ್ಮುಂದೆ ಬಂದು ಹೋದವು.
ಮಹಾನಗರ ನನ್ನನ್ನು ಸ್ವಾಗತಿಸಿದ್ದು ಸಂಚಾರ ದಟ್ಟಣೆಯಿಂದ ಅದೂ ರಾತ್ರಿ ೯ರ ಅವೇಳೆಯಲ್ಲಿ. ಆಗ ನೆನಪಾಗಿದ್ದು ಇತ್ತೀಚೆಗೆ ವಿದೇಶ ಪ್ರಯಾಣ ಹೋಗಿದ್ದ ಗೆಳೆಯ ಹೇಳಿದ ಮಾತುಗಳು, ಇಲ್ಲಿ ಸಂಚಾರ ದಟ್ಟಣೆಯಿಲ್ಲದೇ ನಿದ್ದೆಯೇ ಬರೊಲ್ಲ. ರಾತ್ರಿಯೂಟಕ್ಕೆ ಹೋದಾಗ ಉಣ್ಣಲು ಬಲು ಕಷ್ಟವಾಗಿತ್ತು. ಅದೇನೂ ಆಹಾರ ಪದಾರ್ಥಗಳೋ, ಯಾವುದೇ ರುಚಿಯಿರಲಿಲ್ಲ. ಅದೇ ಹಳ್ಳಿಯ ತಿಂಡಿಗಳ ನೆನೆದರೆ ಬಾಯಲ್ಲಿ ನೀರೂರಿತ್ತಿದೆ, ನಿಮಗೆ?.
ಆದರೆ ಉದ್ಯೋಗಕ್ಕಾಗಿ ಮಹಾನಗರಿಯಲ್ಲಿರುವುದಿರರಿಂದ ಎಲ್ಲದಕ್ಕೂ ಹೊಂದಿಕೊಳ್ಳಲೇಬೇಕು. ಅಂತೆಯೇದಿನ ಬದಲಾಗುತ್ತಿದೆ, ಕಾಲ ಕಳೆಯುತ್ತಿದೆ, ಜೀವನವೂ ಕೂಡಾ ಅಲ್ಲವೇ?...

2 comments:

  1. ಅಯ್ಯೊ ಅಯ್ಯೋ ಪುಣ್ಯಾತ್ಮಾ..... ಆ ಹಲಸಿನ ಸೋಂಟೆ, ಬೇಳೆ, ಚೆಕ್ಕರ್ಪೆ ದೋಸೆ, ಹಲಸಿನ ದೋಸೆ ಹೇಳಿಗೊಂಡು ಎಂಗಳ ಬಾಯಿಲಿ ನೀರು ಅರಿಶುತ್ತೆಯನ್ನೇ.... ನಿನಗೆ ಪಾಪ ತಟ್ಟುಗು.... ಒಂದಾರಿ ಎನ್ನ ದಿನಿಗೇಳುಲೆ ಆವ್ತಿತ್ತಿಲ್ಯಾ....?

    ReplyDelete
  2. ಚೊಲೋ ಬರದ್ದೆ . ಊರು ಬಿಟ್ಟು ಕಲಿಯಕ್ಕೆ ಬೆಂಗಳೂರಿಗೆ ಬಂದ ನಂಗೆ ನನ್ನ ಮನೆ ಕಡೆ ನೆನಪು ಆತು ನಿನ್ನ ಬರಹ ಓದಿ :)

    ReplyDelete