Tuesday, December 22, 2009

ಹಬ್ಬದ ಸಂಭ್ರಮ ಫೆಸ್ಟಿವಲ್ ನಲ್ಲಿ ಸಿಕ್ಕಿತೇ..!?

 ಹಳ್ಳಿಯಲ್ಲಿ.. 
ಮನೆಯಲ್ಲಿ ಎಲ್ಲೆಲ್ಲೂ ಸಡಗರ.. ಚಿಕ್ಕ ಮಗುವಿನಾದಿಯಿಂದ ಹಿರಿಯಜ್ಜನಲ್ಲೂ ಉತ್ಸಾಹದ ಚಿಲುಮೆ.. ಅಸ್ಟೇ ಅಲ್ಲ ಕೊಟ್ಟಿಗೆಯ ಗೋವುಗಳಲ್ಲೂ ಹುರುಪು.. ಮನೆ ಕಾಯುವ ಶ್ವಾನವು ನಿಂತಲ್ಲಿ ನಿಲ್ಲುತ್ತಿರಲಿಲ್ಲ. ಹೌದು.. ಇದು ಹಬ್ಬ ಬಂತೆಂದರೆ ಹಳ್ಳಿಮನೆಯಲ್ಲಿ ಕಾಣುತ್ತಿದ್ದ ದೃಶ್ಯಗಳು. ಇಸ್ಟೇ
ಅಲ್ಲ ಈ ಸಲ ಏನು ಕಜ್ಜಾಯ ಮಾಡುವುದು. ಯಾರು ಯಾವ ಹೊಸ ಬಟ್ಟೆ ತೊಡುವುದು ಇತ್ಯಾದಿ.. ಹಳ್ಳಿ ಮನೆಗಳಲ್ಲಿ ದೀಪಾವಳಿಯಾದಿ   ಹಬ್ಬಗಳ ಸಮಯದಲ್ಲಿ ಇಂತದ್ದೊಂದು ಹುರುಪು, ಉತ್ಸಾಹ ಸದಾ ಇರುತ್ತದೆ. ಮನೆ ಮಂದಿಯೆಲ್ಲ ಒಂದಾಗಿ ಆಚರಿಸುವ ಹಬ್ಬ ಹರಿದಿನಗಳು ಒಂದು ಮೌಲಿಕ ಭಾವನೆಯನ್ನು ವ್ಯಕ್ತಪಡಿಸುತ್ತದೆ.  

ಪಟ್ಟಣದಲ್ಲಿ..
"ಹೇ ನಾಡಿದ್ದು ದೀಪಾವಳಿ ಅಂತೆ.. ನಿಂಗೂ ರಜಾ ಇದೆಯಲ್ಲಾ.. ಎಷ್ಟು ದಿನ ರಜಾ.. ಫೆಸ್ಟಿವಲ್ ಆದ್ರಿಂದ ದೇವಸ್ಥಾನಕ್ಕೆ ಹೋಗಬೇಕು.. ಯಾವ ದೇವಸ್ಥಾನಕ್ಕೆ ಹೋಗೋಣ.. ಗಾಳಿ ಆಂಜನೇಯನಲ್ಲಿಗೋ, ಗಣಪತಿಯಲ್ಲಿಗೋ, ಗವಿ ಗಂಗಾಧರೇಶ್ವರನಲ್ಲಿಗೋ.. ಬೇಗನೆ ಯೋಚಿಸು. ಆಮೇಲೆ ಉಟಕ್ಕೆ ಹಳ್ಳಿಮನೆಗೆ ಹೋಗೋಣ.. ನಂತರ ಲಾಲ್ಬಾಗಿಗೆ ಹೋಗಿ  ಎಂ ಟಿ ಆರ್ ನಲ್ಲಿ  ಫೆಸ್ಟಿವಲ್ ಊಟ ಮಾಡಿ ಮನೆಗೆ ಹೋಗಿ ಪಟಾಕಿ ಸಿಡಿಸೋಣ." ಏನಂತಿ?
ಅಬ್ಬಬ್ಬಾ ಅಂದಿರಾ!? ಹಾಂ..!! ಇದು ಎರಡು ಮುಖಗಳ ವಾಸ್ತವಿಕತೆ. ಹಳ್ಳಿಗೂ ದಿಲ್ಲಿಗೂ(ಪಟ್ಟಣ) ಅಂತರ.. ಅಂತರಾಳ.. ಹಳ್ಳಿಯ ಸಂಭ್ರಮ ಪಟ್ಟಣದಲ್ಲಿಲ್ಲ. ಪಟ್ಟಣದ ಗೌಜಿ ಗದ್ದಲ ಹಳ್ಳಿಯಲ್ಲಿಲ್ಲ. ಎಲ್ಲರೂ ಹಬ್ಬವನ್ನು ಆಚರಿಸುವವರೇ..

ಆದರೆ...

ಹಳ್ಳಿಯಲ್ಲಿ ಪ್ರತಿಯೊಬ್ಬನ ಭಾವನೆಗಳು ಸ್ಪುಟಗೊಳ್ಳುತ್ತವೆ. ತನ್ನೆಲ್ಲ ಯೋಚನೆಗಳನ್ನು ಬದಿಗಿಟ್ಟು ಸಂಭ್ರಮದಿಂದ ಹಬ್ಬದಲ್ಲಿ ಎಲ್ಲರೊಂದಾಗಿ ಭಾಗವಹಿಸುತ್ತಾರೆ.
ಇತ್ತ ಪಟ್ಟಣದಲ್ಲಿ ನಾಳೆಯ ಚಿಂತೆಯಲ್ಲಿ ಇಂದಿನ ಫೆಸ್ಟಿವಲ್. ಇಂದು ಕೆಲಸಕ್ಕೆ ರಜಾ, ಹಾಗಾಗಿ ವಿರಾಮವನ್ನು ಬಯಸುತ್ತಾ ದೇವದರ್ಶನ ಮಾಡಬಯಸುತ್ತಾರೆ ಜನ. ಅದಕ್ಕಾಗಿ ಫೆಸ್ಟಿವಲ್ ಲಂಚ್ ಗೆ ಹಳ್ಳಿಮನೆಗೋ, ವಿರಾಮಕ್ಕಾಗಿ ಲಾಲ್ಭಾಗಿಗೋ ಮುಖ ಮಾಡುತ್ತಾರೆ. ಫೆಸ್ಟಿವಲ್ ಸುಖವನ್ನು ಪಟಾಕಿ ಸಿಡಿಸಿ ಆಚರಿಸುತ್ತಾರೆ.

ಇತ್ತ ಹಳ್ಳಿಯಲ್ಲಿ ಅತ್ತೆ ಸೊಸೆಯರು ವಿಧ ವಿಧವಾದ ಕಜ್ಜಾಯಗಳನ್ನು ಮಾಡುವುದರಲ್ಲಿ ಮಗ್ನರಾಗಿದ್ದರೆ ಅಪ್ಪ ಮಗ ದೇವ ಪೂಜೆ, ಗೋಪುಜೆಯ ತಯಾರಿಯಲ್ಲಿರುತ್ತಾರೆ. ಎಲ್ಲಾ ತಯಾರಿ ಆದ ನಂತರ ಪುಜಾದಿ ಕಾರ್ಯ ಮಾಡಿ, ಕಜ್ಜಾಯ ನೈವೇದ್ಯ ಆದ ನಂತರ ಸುಖ ಭೋಜನ. ನಂತರ  ಸ್ವಲ್ಪ ಹರಟೆ, ವಿಶ್ರಾಂತಿ. ಸಂಜೆ ಅಲ್ಪ ಸ್ವಲ್ಪ ಪಟಾಕಿ ಸಿಡಿಸಿದರು ದಿಪಾಲ್ನ್ಕಾರಕ್ಕೆ ಹೆಚ್ಚಿನ ಮಹತ್ವ ಕೊಡುತ್ತಾರೆ.
 
ಮೊದಲೇ ಹೇಳಿದಂತೆ ಇದು ಎರಡು ಮುಖಗಳ ವಾಸ್ತವಿಕತೆ. ಹಳ್ಳಿಗಳು ನಗರಗಳಾಗುತ್ತಿರುವ ಕಾಲದಲ್ಲಿ ಮುಂದಿನ ಪೀಳಿಗೆ  ಈ ಸಂಭ್ರಮವನ್ನು ಪಡೆಯುತ್ತಾ ಎಂಬ ಆತಂಕ ನನ್ನದು. ಅದಕ್ಕಾಗಿ ಪಟ್ಟಣದಲ್ಲಿರುವ ಮಿತ್ರರಲ್ಲಿ ಹಬ್ಬಹರಿದಿನಗಳನ್ನು ಹಳ್ಳಿಮನೆಯಲ್ಲಿ  ಆಚರಿಸೊಣ ಎಂಬ ವಿನಂತಿ. ಇದು ಸನಾತನ ಸಂಸ್ಕೃತಿಯ ಕೌಟುಂಬಿಕ ಜೀವನ ಪದ್ದತಿಯನ್ನು ಎತ್ತಿ ಹಿಡಿಯುವಲ್ಲಿ ಮಹತ್ತರ ಪಾತ್ರವನ್ನು ನೀಡುತ್ತದೆ ಎಂಬ ಆಶಯ ನನ್ನದು. ಇಲ್ಲಿ ನಾನು ಹಬ್ಬವನ್ನು ಉದಾಹರಿಸಿ ವಿಷಯವನ್ನು ಪ್ರಸ್ತಾಪಿಸಿದ್ದೆನೆಷ್ಟೇ. ಇಷ್ಟೇ  ಅಲ್ಲ ಆ ನಿರ್ಮಲ ಪಕೃತಿ.. ಆ ಪ್ರಶಾಂತ ಪರಿಸರ.. ಕೂಡ ನಮ್ಮನ್ನು ಇನ್ನಷ್ಟು ಸುಖಿಗಳನ್ನಾಗಿಸುತ್ತೆ  ಅಲ್ಲವೇ..?   

ಇಂತಿ
ಅಜ್ಜಕಾನ ರಾಮ