Wednesday, January 6, 2010

ಭಾಷಾಭಿಮಾನದ ಕನ್ನಡ ರಾಜ್ಯೋತ್ಸವ..!?

"ಹೆಲ್ಲಾರಿಗೂ ನಮಸ್ಕಾರ. ಹಿಂದು ನಮ್ಮ ಸುದಿನ. ಕನ್ನಡ ಮಾತೆಯ ಮಕ್ಕಲಾದ ನಾವು  ಎಮ್ಮೆ ಪಡುವ ದಿನ. ಪ್ರತಿ ವರ್ಷದಂತೆ ಇ ವರ್ಷವೂ ನಾವು ಕನ್ನಡ ರಾಜ್ಯೋತ್ಸವ ಅಬ್ಬವನ್ನು ನಮ್ಮ ಕನ್ನಡ ಇತರಕ್ಷಣ ವೇದಿಕೆ ವತಿಯಿಂದ ಹಾಚರಿಸುತ್ತಿದ್ದೇವೆ . ಎಲ್ಲಾರಿಗೂ  ಕನ್ನಡ ಮಾತೆಯ ಪೂಜೆಗೆ ಹಾದರದ ಸ್ವಾಗತ...."

ಏನಿದು..?, ಏನಂದಿರಿ..? ಎಂಬ ತಳಮಳವೇ?
ಹೌದು. ಖಂಡಿತ.!!
ಇದು ಕಳೆದೊಂದು ತಿಂಗಳಿನಿಂದ ಮಹಾನಗರ ಬೆಂಗಳೂರಿನ ಬೀದಿ ಬೀದಿಗಳಲ್ಲಿ ಸಂಜೆ ಆರರ ಸಮಯದಲ್ಲಿ ಕೇಳುತ್ತಿದ್ದ ಮಾತುಗಳಿವು. ನವೆಂಬರ್ ಬಂತೆಂದರ ಎಚ್ಚೆತ್ತುಕೊಳ್ಳುವ ಕನ್ನಡ ಸಂಘಟನೆಗಳು ನಡೆಸುವ ರಾಜ್ಯೋತ್ಸವ ಕಾರ್ಯಕ್ರಮದ ಆರಂಭದಲ್ಲಿ ಕೇಳಿಬಂದಂತಹ ಉಕ್ತಿಗಳಿವು. ಇಲ್ಲಿ ಆರಂಭವಾದದ್ದು ಕಾರ್ಯಕ್ರಮದುದ್ದಕ್ಕೂ ಕೇಳಿದ ನುಡಿಗಳು. ಕನ್ನಡದ ರಕ್ಷಕರ ಕನ್ನಡ ಭಕ್ಷಣೆಯಿದು.

ನಮ್ಮದು ಕರುನಾಡು. ಅನೇಕ ದಿಗ್ದರ್ಶಕರನ್ನು, ದಾರ್ಶನಿಕರನ್ನು ನೀಡಿದ ನಾಡು. ಅಂತೆಯೇ ಅತ್ಯಂತ ಸುಂದರ ಭಾಷೆಯನ್ನು ಪಡೆದವರು ನಾವು. ಬೇಂದ್ರೆ, ಕುವೆಂಪು, ಅಡಿಗ ಮೊದಲಾದ ಸಾಹಿತ್ಯ ಸಾರಸ್ವತರ ಕಂಡ ನಾಡು ನಮ್ಮದು. ಇಂತಹ ನಾಡಲ್ಲಿ ನಮ್ಮ ಕನ್ನಡ ಇಂದು ಏನಾಗಿದೆ ಎಂಬುದನ್ನು ಮೊದಲ ನಾಲ್ಕು ಸಾಲುಗಳು ಹೇಳುತ್ತವೆ.

ಇಂದು ಮಹಾನಗರ ಹಲವು ಸಂಸ್ಕೃತಿಯ ಜನರ ಬೀಡಾಗಿದೆ. ಅವರೆಲ್ಲರ ಮಧ್ಯೆ ನಮ್ಮತನ ಉಳಿಸುವ ಮಾಡುತ್ತೇವೆಂದು ಹೇಳುವ ಕನ್ನಡಪರ ಹೋರಾಟಗಾರರ ಮಾತು ಕೇಳಿದರೆ ನಾವೆಲ್ಲಿದ್ದೇವೆಂಬ ಚಿಂತೆ ಮನಸ್ಸಿನಲ್ಲಿ ಶುರುವಾಗುತ್ತದೆ. ನಾನು ಸಹ ಇಂತಹ ಮಾತುಗಳನ್ನು ಇತ್ತೀಚೆಗೆ ಕೇಳಿದಾಗ ಅದು ಇಲ್ಲಿ ಬರೆಯುವುದಕ್ಕೆ ಸಾಧ್ಯವಾಯಿತು.

 ಸಂಜೆ ಆರರ ಸಮಯದಲ್ಲಿ ಕಚೇರಿಯಿಂದ ಮನೆಗೆ ಹಿಂತಿರುಗುತ್ತಿದ್ದಾಗ ದಾರಿಮಧ್ಯೆ ನಡುಯುತ್ತಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ  ಕೇಳಿದ ಮಾತುಗಳಿವು. ನಮ್ಮ ಕನ್ನಡನಾಡಿನ ಶ್ರೇಷ್ಠತೆಯ ಕಾರ್ಯಕ್ರಮವೆಂದು ಸ್ವಲ್ಪ ಹೊತ್ತು ಅಲ್ಲಿ ನಿಂತಾಗ ಹಲವು ಸತ್ಯಗಳು ಬಯಲಾದವು. ನಿರೂಪಕ ಮುಂದುವರೆಸಿ "ಈಗ ನಮ್ಮ ಸದಸ್ಯರ ಪುತ್ರ ಎಲ್ದನೆ ಕ್ಲಾಸ್ನಲ್ಲಿ ಸ್ಟಡಿ ಮಾಡುತ್ತಿರುವ ಹಾದರ್ಶ ಅವರಿಂದ ನೃತ್ಯ ಕಾರ್ಯಕ್ರಮ" ಎಂಬುದನ್ನು ಕೇಳಿ, ಚಿಕ್ಕಂದಿನಲ್ಲಿ ನಾಟಕಗಳನ್ನು ನೆನಪಿಸಿಕೊಂಡು ನಿಂತೆ. ಸ್ವಲ್ಪದರಲ್ಲೇ ಹಾಡು ಆರಂಭವಾಯಿತು. " ಹೇ ಪಾರೂ... ಹೇ  ಪಾರೂ... "

ಕನ್ನಡ ನಾಡು ನುಡಿಗೆ ಹೆಮ್ಮೆಯನ್ನು ಪ್ರಸ್ತುತ ಪಡಿಸುವ ಹಾಡೊಂದಕ್ಕೆ ಆ  ಪುಟ್ಟ ಆದರ್ಶ (, ಅಲ್ಲ 'ಹಾದರ್ಶ'!)  ಕುಣಿಯಬಹುದೆಂಬ ನನ್ನ ಆಸೆ ಅಲ್ಲೇ ಕಮರಿತ್ತು. ಮುಂದೆ  ಐತಲಕ್ಕಡಿ.. ಮುಂತಾದ ಹಾಡುಗಳ ಸಾಲೋ ಸಾಲು. ನಿರೂಪಕ ಹೇಳಿದಂತೆ ಇದೊಂದು 'ಇತರಕ್ಷಣ ವೇದಿಕೆಯ ಎಮ್ಮೆಯ ದಿನ' ಎಂದುಕೊಳ್ಳುತ್ತ ಮನೆಗೆ ಬಂದು ದೂರದರ್ಶನವನ್ನು ಹಾಕಿದರೆ - ಅಲ್ಲೂ ನೃತ್ಯ ಕಾರ್ಯಕ್ರಮವೊಂದರ ಕನ್ನಡ ರಾಜ್ಯೋತ್ಸವ ವಿಶೇಷ ಸಂಚಿಕೆಯಲ್ಲಿ ಬಹುಜನರ ಅಪೇಕ್ಷೆಯ ಮೇರೆಗೆ ಒನ್ಸ್ ಮೋರ್ "ಹೇ ಪಾರೂ... ಹೇ  ಪಾರೂ... ".

ಭಾಷಾಭಿಮಾನವು ಸದಭಿರುಚಿಯೊಂದಿಗೆ ಹೊರಡಲಿ..!
ಏನಂತೀರಿ?