Sunday, April 26, 2009

ಚಿಗುರೊಡೆದ ಮಾಸಿದ ನೆನಪು

ಇಂದು:
ಇಳಿ ಸಂಜೆ. ಚುಮು ಚುಮು ಚಳಿ. ಪಿಟಿ ಪಿಟಿ ಮಳೆ. ಇದು ಮೊನ್ನೆಯ ಮಹಾನಗರದ [ಬೆಂಗಳೂರಿನ] ಸನ್ನಿವೇಶ. ಈ ವರ್ಷದ ಮೊದಲ ಧಾರೆ ಅಂದು ಬಂದಿತ್ತು ಮಹಾನಗರಿಗೆ.
ನಾನೂ ನೂರಾರು ಜನರಂತೆ ಸಾಮಾನ್ಯ ಪಯಣಿಗ ಮಹಾನಗರ ಸಾರಿಗೆ ಬಂಡಿಗೆ. ಎಲ್ಲೆಲ್ಲೂ ಗಬ್ಬು ವಾಸನೆ. ಏನೆಂದು ನೋಡಿದರೆ ಮುಗಿಲ ಧಾರೆಗೆ ಒಡಲ [ಚರಂಡಿ] ಧಾರೆ ಸೇರಿ ಆದ (ಅ) ವ್ಯವಸ್ಥೆ. ನಾಲ್ಕಾರು ಜನ ಬಂಡಿಯ ಕಿಟಕಿ ಪಕ್ಕದಲ್ಲಿ ಕುಳಿತ ಮಹನೀಯರು ಮಳೆ ಹನಿ ಕಡಿದರೂ, ಕಿಟಕಿ ಮುಚ್ಚಿ ಚಳಿಚಳಿ ಎನ್ನುತ್ತಿದ್ದರು. ನನಗೋ ಉಸಿರು ನಿಲ್ಲುವ ಸ್ಥಿತಿ. ಮೈಯೆಲ್ಲಾ ಬೆವರು, ಜೊತೆಗೆ ಬಂಡಿಯ ದ್ವಾರದ ಮೂಲಕ ಬರುವ ವಾಸನೆ. ಅತ್ತ ಹೊರಗೆ ನೋಡಿದರೆ ದೊಡ್ಡ ಮೋರಿ ಕೆಲಸ ನಡೆಯುತ್ತಿದೆ, ಅಡಚಣೆಗಾಗಿ ಕ್ಷಮಿಸಿ ಎಂಬ ಹಲಗೆ ಬರಹ. ಏನು ಮಾಡುವುದು ಎಂದು ಯೋಚಿಸುತ್ತಿದ್ದಾಗ ನೆನಪಾಗಿದ್ದು . . .

ಅಂದು:
ಭೋರ್ಗರೆಯುವ ಮಳೆ. ಮೈ ನಡಗಿಸುವ ಚಳಿ. ನೆನೆಸಿದರೆ ಮೈಜುಮ್ಮೆನಿಸುತ್ತದೆ. ಸುಮಾರು ಹದಿನೆಂಟು ವರುಷದ ಹಿಂದಿನ ದಿನಗಳು. ನಾನಾಗ ಎಂಟರ ಪೋರ. ಮಳೆಗಾಲದ ರಾತ್ರಿ. ಇಂದು ಶುರುವಾದ ಮಳೆ ಹನಿ ಕಡಿಯುವುದು ನಾಲ್ಕಾರು ದಿನಗಳ ನಂತರವೆ. ನನ್ನ ಮನೆ ಇರುವುದು ಮಲೆನಾಡ ಮಡಿಲಲ್ಲಿ. 'ಬಂಟ ಮಲೆ'ಯ [ಸುಳ್ಯ ತಾಲೋಕಿನ ಪಂಜ, ಕಲ್ಮಡ್ಕ, ಕುಕ್ಕುಜಡ್ಕ ಗ್ರಾಮಗಳಲ್ಲಿ] ತಪ್ಪಲಿನಲ್ಲಿ. ಮಳೆಯ ಜೊತೆ ಆರ್ಭಟಿಸುವ ಗುಡುಗು, ಕಣ್ಣು ಕೋರೈಸುವ ಮಿಂಚು. ಅಂತಹ ಒಂದು ರಾತ್ರಿ. ಅವಾಗ ಆಕಾಶವಾಣಿಯಲ್ಲಿ ಪ್ರಸಾರವಾಗುವ 'ವಾರ್ತೆಗಳು' [೭-೩೫ ರಿಂದ ೭-೪೫] ಕೇಳಿ ಊಟ ಮಾಡಿ ನಿದ್ರೆಗೆ ಜಾರುವ ಪದ್ದತಿ ನಮ್ಮ ಮನೆಯಲ್ಲಿ. ಈಗಿನಂತೆ ದೂರದರ್ಶನ, ವಿದ್ಯುತ್ ಇರಲಿಲ್ಲ ನಮ್ಮ ಮನೆಯಲ್ಲಿ. ಸೀಮೆ ಎಣ್ಣೆ ದೀಪ ಬೆಳಕಿಗಾಗಿ ಇರುವ ದಾರಿ. ಅದೋ ಸಣ್ಣ ಗಾಳಿ ಬಂದರೆ ನಂದುವುದು. ಅಂತೆಯೆ ಪದ್ದತಿಯಂತೆ ಮಲಗಿದ್ದ ನನಗೆ ಅವೇಳೆಯಲ್ಲಿ[ ಮಧ್ಯರಾತ್ರಿಯ ನಂತರ ] ಎಚ್ಚರವಾಗಿತ್ತು. ಎರಡೆರಡು ಕಂಬಳಿ ಹೊದ್ದು ಮಲಗಿದ್ದರೂ ನಡುಕ ನಿಂತಿರಲಿಲ್ಲ.ನನಗೆ ಮೂತ್ರಕ್ಕೆ ಹೋಗುವ ಅವಶ್ಯಕತೆ ಉಂಟಾಗಿ ಅಮ್ಮನ ಕರೆದೆ. ಅಮ್ಮ ನಾನು ಇಲ್ಲಿಂದಲೇ ಟಾರ್ಚು ಬಿಡುವೆ ಎಂದು ೩ ಬ್ಯಾಟರಿಯ ದೊಡ್ಡ ಟಾರ್ಚಿನ ಬೆಳಕನ್ನು ಬಿಟ್ಟಳು. ಏನು ಮಾಡುವುದು, ಹೋಗಲೇಬೇಕು, ಇಲ್ಲಾಂದ್ರೆ ಚಾಪೆ ಒದ್ದೆಯಾಗುವ ಭಯ. ಧೈರ್ಯದಿಂದ ಮುಂಬಾಗಿಲು ತೆರೆದು ಜಗಲಿಯಲ್ಲಿ
ನಿಂತು ಮೂತ್ರ ಮಾಡುತ್ತಿದ್ದಾಗ ಕಂಡು ಕೇಳಿತ್ತು, ಈಗಿನ ಪಂದ್ಯಾವಳಿಯ ನಂತರ ಬಿಡುವ ಸಿಡಿಮದ್ದಿನಂತೆ ಬೆಳಕು ಜೊತೆಗೆ ಟಪ್ ಟಪ್ . . . ಧೊಪ್ ಧೊಪೆಂಬ ಶಬ್ದ. ನಾನೋ ಭಯದಿಂದ ಅರ್ಧದಲ್ಲೆ ಕೆಲಸ ನಿಲ್ಲಿಸಿ ಒಳಗೆ ಹೋಗಿ ಮಲಗಿದವ ಎದ್ದಿದ್ದು ಮರುದಿನ ಸೂರ್ಯಪ್ರಕಾಶ ಬೆನ್ನ ಮೇಲೆ ಬಿದ್ದ ಮೇಲೆಯೆ. ರಾತ್ರಿ ನೆಟ್ಟಗಾಗಿದ ರೋಮ ಬೆಳಗ್ಗಿನವರೆಗೆ ಹಾಗೆ ಇತ್ತು.

ಆಗಿನ ಮೊದಲ ಮಳೆಯೂ ಇದೇ ರೀತಿ ಆರ್ಭಟದಿಂದಲೇ ಬರುತ್ತಿತ್ತು. ಮೊದಲ ಮಳೆಯೆಂದರೆ ಎಲ್ಲಿಲ್ಲದ ಸಂಭ್ರಮ. ಮಣ್ಣಿನ ಸುವಾಸನೆ, ಆಲಿಕಲ್ಲು, ಮರಗಿಡಗಳ ಮಧುರ ಗಾಯನ. ಈಗ ನನ್ನಂತೆ ಕೆಲವರು ಬರೆಯಲು, ನೆನಪಿಸಲು ಮಾತ್ರ. ಆ ಮಳೆ ಹನಿಯ ಜೊತೆ ಮಕ್ಕಳ ಆಟ, ದೊಡ್ಡವರ ಆರ್ಭಟ. ಇದು ಮಲೆನಾಡಿಗೆ ಮಾತ್ರ ಚೆಂದ. ಮೊದಲ ಮಳೆಗೆ ಊರ ಹೊಳೆ (ವಾಟೆಚ್ಚಾರು) ಹೊಂಬಣ್ಣದಿಂದ ತುಂಬಿ ಹರಿಯುತ್ತಿತ್ತು. ಮಳೆಗಾಲ ಆರಂಭವಾದಂತೆ ಅಟ್ಟದಲ್ಲಿಟ್ಟಿದ್ದ (ಉಪ್ಪರಿಗೆ/ಮಹಡಿ) ಹಲಸಿನ ಹಪ್ಪಳ, ಸೆಂಡಿಗೆ, ಹಲಸಿನ ಬೀಜ ಅಡುಗೆ ಮನೆಗೆ ಬರುತ್ತಿದ್ದವು. ಈ ಬಗ್ಗೆ ಇನ್ನೊಮ್ಮೆ ಬರೆಯುವೆ.

ಪ್ರಸಕ್ತ:

ಮಹಾನಗರದ ಮಳೆಗೆ ಹಲಸಿನ ಹಪ್ಪಳ ಸೆಂಡಿಗೆಗಳೆಲ್ಲಿ ಬಂತು. ಚಳಿ ಬಿಟ್ಟು ಹೊರಗೆ ಹೋದರೆ ಗುರು ಭಟ್ರ ಅಂಗಡಿಯ ಭಜ್ಜಿ ಬೋಂಡ, ಇಲ್ಲಾಂದ್ರೆ ಅಯ್ಯಂಗಾರ್ ಬೇಕರಿಯಲ್ಲಿ ಸಿಗುವ ಕರಿದ ತಿಂಡಿ ಮತ್ತು ಬೈಟು ಕಾಫಿ. ಇನ್ನು ಹೆಚ್ಚ್ಚು ಜನ ಬಯಸುವುದು ವಿದೇಶಿ ಶಕ್ತಿಯ ಅದೇನೊ ಹೇಳುತಾರಲ್ಲ 'ಲೇಸ್' [ಬೂಟ್ ಕಟ್ಟುವುದಲ್ಲ], ಕುರು ಕುರೆ. ಅದನ್ನೆ ಆಂಗ್ಲ ಭಾಷಿಕ ' ಜಂಕ್ ಫುಡ್' ಅಂದುಕೊಂಡೇ ಮೆಲ್ಲುವವರೇ ಹೆಚ್ಚು.
ಅಂತೂ ಮಹಾನಗರ ಸಾರಿಗೆ ಬಂಡಿ ನಾನಿಳಿಯುವ ನಿಲ್ದಾಣಕ್ಕೆ ಬಂದಾಗ ಯೋಚನಾಲಹರಿಯಿಂದ ಹೊರ ಬಂದೆ. ಇತ್ತ ಮಳೆಯೂ ಕಡಿಮೆಯಾಗಿತ್ತು. ಮನೆಗೆ ಬಂದು ದೂರದರ್ಶನ ಹಾಕಿದರೆ ಅದರಲ್ಲಿ ಚುನಾವಣಾ ಭರಾಟೆಯೊಂದಿಗೆ ಜಯನಗರದಲ್ಲಿ ೨ ಮರ, ಸದಾಶಿವ ನಗರದಲ್ಲಿ ೩ ಮರ ಧರೆಗುರುಳಿ ರಸ್ತೆ ಸಂಚಾರಕ್ಕೆ ಅಡ್ಡಿ ಎಂಬ 'ತುಂಡರಿಸುವ ವಾರ್ತೆ' [ಬ್ರೇಕಿಂಗ್ ನ್ಯೂಸ್] ದೊಡ್ಡ ಅಡಿ ಬರಹಗಳೊಂದಿಗೆ ಪ್ರಸಾರವಾಗುತ್ತಿತ್ತು. ಮತ್ತೆ ಯೋಚನಾ ಲಹರಿಗೆ ಬಿದ್ದ ನನಗೆ ನೆನಪಾಗಿದ್ದು ಅದೇ ಹಿಂದಿನ ಊರ ಪರಿಸ್ಥಿತಿ.

ಹಿಂದೆ:

ನಮ್ಮ ಮನೆಗೂ ವಿದ್ಯುದ್ದೀಪ ಬೇಕೆಂದು ಹಾಕಿಸಿಕೊಂಡಿದ್ದೆವು. ಅದಾಗಿ ಒಂದೇ ತಿಂಗಳಲ್ಲಿ ಶುರುವಾದ ಮೊದಲ ದಿನ ರಾತ್ರಿಯೆ ವಿದ್ಯುತ್ ಮಂಗ ಮಾಯ. ಏನಾಯ್ತು ಅಂತ ಕೇಳಿದ್ರೆ ಅದು ಮತ್ತಿಗುಡ್ಡೆ [ಬಂಟಮಲೆಯ ತಪ್ಪಲು ಪ್ರದೇಶ, ನಮ್ಮ ಊರು ಮತ್ತು ಪಕ್ಕದ ಊರಿನ ಗಡಿ ಬ್ರೃಹತ್ ಮರಗಳಿಂದ ಕೂಡಿದ ಪ್ರದೇಶ] ಯಲ್ಲಿ ಒಂದು ದೊಡ್ಡ ಚಿರ್ಪಿನ ಮರ ಬಿದ್ದು ವಿದ್ಯುತ್ ಕಂಬಗಳೆರಡು ಧರೆಗುರುಳಿದೆ ಎಂಬ ಸುದ್ದಿ. ಮುಂದೆ ಮನೆಯಲ್ಲಿ ವಿದ್ಯುದ್ದೀಪ ಉರಿಸಲು ಒಂದು ತಿಂಗಳೇ ಹಿಡಿಯಿತು. ಈಗ ಅಂತಿಲ್ಲ, ದಿನೆ ದಿನೇ ಹೊಸ ಹೊಸ ತಂತ್ರಜ್ಞಾನ ಬರುತ್ತಿದೆ. ಬದುಕು ಯಾಂತ್ರಿಕಮಯವಾಗುತ್ತಿದೆ. ಅಂತಹ ಸಂದರ್ಭದಲ್ಲಿ ಹಿಂದಿನ ಮದುರಮಯ ಜೀವನದ ತುಣುಕುಗಳನ್ನು ನೆನಪಿಸುವಲ್ಲಿ ಇಷ್ಟೆಲ್ಲ ಬರೆಯಬೇಕಾಯಿತು. ಇನ್ನು ಓದುಗರಾದ ನೀವು ಈ ಬಗ್ಗೆ ಏನು ಹೇಳುವಿರಿ ಎಂದು ತಿಳಿಯುವ ಕುತೂಹಲ ನನಗಿದೆ.

ಪ್ರೀತಿಯಿರಲಿ.
ನಿಮ್ಮ ಅಜ್ಜಕಾನ ರಾಮ.

Monday, April 13, 2009

ಮೊದಲ ಸಲ ಬ್ಲಾಗ್ ರಚಿಸಿದಾಗ ಏನು ಬರೆಯುವುದು ತಿಳಿಯುತ್ತಿಲ್ಲ ಅನ್ನುವುದಕ್ಕಿಂತ ಸಮಯದ ಅಭಾವ ಕಾಡುತ್ತಿದೆ. ಕಂಡಿತ ಬರೆಯುವೆ ಕೆಲವೇ ದಿನಗಳಲ್ಲಿ.